Saturday, December 24, 2011

ಅಮ್ಮ ನಿನ್ನ ತೋಳಿನಲ್ಲಿ....

 
 
 
ಮನೆ ಮುಂದೆ ಕಾರಿನ ಹಾರ್ನ್ ಆದೊಡನೆ ಕಾತರದಲ್ಲಿದ್ದ ಅಮ್ಮನ ಮುಖದ ಮೇಲೆ ಹರುಷದ ನಗೆ.
ಕಾರು ಬಾಗಿಲು ತೆಗೆದು ನೆಲಕ್ಕಡಿಯಿಟ್ಟ ಮಗನ ಕಂಗಳಲ್ಲಿ ಆಯಾಸ.
ಕಾರಿನ ಹಿಂಬದಿಯ ಬಾಗಿಲಿಂದ ಹೊರಬಂದ ಸೊಸೆಯ ಕೈಯಲ್ಲಿ ಮುದ್ದು ಕಂದಮ್ಮ.
 
ಅಮ್ಮನ ಮನದಲ್ಲಿ ಒಂದು ಕ್ಷಣ ಅವರ ನೆನಪಾಯ್ತು.
-------------------*-------------------*-------------------*-------------------*-------------------*-------------------*
ಅಯ್ಯೋ ಅವರಿದ್ದಿದ್ದರೆ....ಎಷ್ಟು ಚೆಂದವಿರುತ್ತಿತ್ತು.
ಬಾಳು ಪೂರ ಸವೆದ ಚಪ್ಪಲಿಯ ಧರಿಸಿಯೇ ಮಗನಿಗೆಂದೇ ಶಾಲೆಗಾಗಿ ಅಂದದ ಬೂಟು ಕೊಡಿಸಿದ್ದರು.
ಸಾವಿರ ಬಾರಿ ಹೆಂಡತಿ ಬೇಡವೆಂದು ಹೇಳಿದ್ದರೂ ಬಿಡದ ಕುಡಿತ, ಮಗ ಹುಟ್ಟಿ ಅವನ ಶಾಲೆಯ ಫೀಸು ಕಟ್ಟಲಾರದೆ ಹೋದಾಗಲೇ ತಾನಾಗಿಯೇ ಬೇಡವೆಂದು ಬಿಟ್ಟು ಹೋಗಿತ್ತು. ಸೋಮಾರಿಯಲ್ಲದಿದ್ದರೂ ಅವಶ್ಯಕತೆಗಷ್ಟು ಮಾತ್ರ ಕೆಲಸಕ್ಕೆ ಹೋಗುತ್ತಿದ್ದ ಅಪ್ಪ ಇದೀಗ ಮಗನ ವಿಧ್ಯಾಭ್ಯಾಸಕ್ಕೆಂದೇ ಹಗಲು-ರಾತ್ರಿ ಕೆಲಸ ಮಾಡಲಾರಂಭಿಸಿದ.ಸುಮ್ಮನೆ ನಡೆಯುತ್ತಿದ್ದ ಜೀವನ ಮಗ ಬಂದೊಡನೆ ದಾಪುಗಾಲು ಹಾಕಿ ಓಡಲಾರಂಭಿಸಿತು.
ಅವನ ಆಟ ಪಾಠ ದಿನ ನಿತ್ಯದ ತುಂಟತನಗಳ  ನೋಡಿಯೇ ಹೊಟ್ಟೆ  ತುಂಬಿಸಿಕೊಂಡಿದ್ದರು ದಂಪತಿಗಳು. ಪಕ್ಕದ ಪಟ್ಟಣಕ್ಕೆ ಮುಂದಿನ ವಿಧ್ಯಾಭ್ಯಾಸಕ್ಕೆಂದು ಆತ ಹೊರಟಾಗಲೇ ಅವರಿಗನ್ನಿಸಿದ್ದು, ಅವ ಇಷ್ಟೊಂದು ದೊಡ್ದವನಾಗಿಬಿಟ್ಟ ಎಂದು.
ಕೆನೆ ಮೊಸರು ಮಗನಿಗಾಗಿಯೇ ತೆಗೆದಿಡುತ್ತಿದ್ದ ಅಮ್ಮನ ಮನಸ್ಸೀಗ ಬರಿ ಖಾಲಿ ಖಾಲಿ.
ಎಡಗಣ್ಣು ಅದುರಿದರೆ, ಗೌಳಿ ಕೂಗಿದರೆ ಮನದಲ್ಲೇನೋ ದುಗುಡ.
ಇತರರು ತಮ್ಮ ಮಗ ತಪ್ಪು ದಾರಿಯ ಹಿಡಿದ ಕತೆಯ ಹೇಳಿದರೆ ಇಲ್ಲೇನೋ ಆಗುತ್ತಿದೆಯೋ ಅನ್ನುವ ಕಲ್ಪನೆ.
ಹಬ್ಬ ಹರಿದಿನ ಬಂದರೆ ಮಗನಿಲ್ಲದ ಹಬ್ಬವೇಕೆ ಅನ್ನುವ ತ್ಯಾಗ ಮನೋಭಾವನೆ.ಅದರೂ ಮಗನ ಮೇಲೆ ಎಂಥದೋ ನಂಬಿಕೆ.
ಇನ್ನೇನು ಮಗನ ಪರೀಕ್ಷೆಗಳು ಹತ್ತಿರವಾಗುತ್ತಿವೆಯೆಂದಾಗಲೇ ಅಪ್ಪ ವಿಧಿವಶರಾಗಿದ್ದರು.
ನಿರ್ಮಲ ಅಕಾಶದಂತಿದ್ದ ಬದುಕಿನಲ್ಲಿ ಕಾರ್ಮುಗಿಲ ಛಾಯೆ ಬಂದೆರಗಿತ್ತು.
ಅಮ್ಮನಿಗಂತು ಈಗ ಬರಿ ಮಗನೇ ಪ್ರಪಂಚವಾಗಿದ್ದ.
 
ಪರೀಕ್ಷೆ ಮುಗಿದು ಮಗ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದದ್ದೇ  ಅವಳಿಗೆ ಬದುಕಿನ ಅತ್ಯಂತ ಆನಂದದ ಕ್ಷಣವಾಗಿತ್ತು.
ಪಕ್ಕದ ಮನೆಮಂದಿಗೆಲ್ಲ ಸಕ್ಕರೆ ಹಂಚಿ ಹೆಮ್ಮೆಯಿಂದ ಮಗನ ಗುಣಗಾನ ಮಾಡಿದ್ದಳು.
ಯೋಗಕ್ಷೇಮದ ಬಗ್ಗೆ ಆಗಾಗ ಮಗನಿಂದ ಪತ್ರಗಳು ಬರುತ್ತಲಿದ್ದವು.
 
ಈಕೆಗೆ ದಿನಗೂಲಿಯೊಂದೇ ಜೀವನ ಸಾಗಿಸುವ ಏಕೈಕ ದಾರಿಯಾಯಿತು.
ಆಕೆಯ ಒಂದೊಂದು ಬೆವರ ಹನಿಯೂ ಮಗನ ಜೀವನದ ಹರುಷವನ್ನು ಬಯಸುತ್ತಲಿದ್ದವು.
  
ವರುಷಗಳು ಕಳೆದವು. ಮನೆಗೆ ಮಗ ಮೊದಲ ಸಂಬಳದೊಡನೆ ಬಂದಿಳಿದಿದ್ದ.
ಹರುಷ ತಡೆಯಲಾಗದೇ ಆನಂದಭಾಷ್ಪ ಸುರಿಸಿದ್ದಳು.
ಮಗನ ಬಾಚಿ ತಬ್ಬಿ ಮುತ್ತುಗಳ ಸುರಿಸಿದವಳಿಗೆ ಸ್ವರ್ಗಕ್ಕೆ ಮೂರೇ ಗೇಣು.
ಆಕೆಯ ಜೀವನದ ಒಂದು ಸದುದ್ದೇಶ ಆಗ ತಾನೆ ಈಡೇರಿತ್ತು.
 
ದಿನಗಳು ಕಳೆದವು. ಅಮ್ಮನ ಮನದಲ್ಲೇಕೋ ತಳಮಳ ಶುರುವಾಯಿತು.
ದಿನಕೊಂದು ಇದ್ದ ಪತ್ರ ವಾರಕ್ಕೆ, ಬರುಬರುತ್ತಾ ತಿಂಗಳಿಗೊಂದು ಆಗತೊಡಗಿತು.
ಮಗನೇಕೋ ದೂರವಾಗತೊಡಗಿದ. ಅಮ್ಮನಿಗಂತೂ ಬಾಯಿಗಿಟ್ಟ ತುತ್ತೂ ರುಚಿಸುತ್ತಿಲ್ಲ.
ಮಗನ ನೆನಪಿನಲ್ಲೇ ದೇಹ ಕೃಶವಾಗುತ್ತ ಬಂತು.
 
ಕೊನೆಗೊಮ್ಮೆ 3-4 ವರ್ಷಗಳ ನಂತರ ಮಗನಿಂದ ಪತ್ರ ಬಂತು.
"ಅಮ್ಮ, ಬಹಳ ದಿನಗಳಿಂದ ಹೇಳಬೇಕಿದ್ದ ವಿಷಯವೊಂದನ್ನು ಈಗ ಹೇಳಲೇಬೇಕೆನಿಸುತ್ತಿದೆ,
ಹೇಗೆ ಶುರು ಮಾಡುವುದೆಂದು ನನಗೆ ಗೊತ್ತಿಲ್ಲ.
ಹುಡುಗಿಯೊಬ್ಬಳನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ.
ಕಾರಣಾಂತರಗಳಿಂದ ಅವಳನ್ನು ತಕ್ಷಣವೇ ಮದುವೆಯಾಗಬೇಕಾಗಿ ಬಂತು.
ನಿನ್ನ ಅನುಮತಿಯ ಪಡೆಯದಲೇ ನನ್ನ ಮದುವೆಯಾಗಿ ಹೋಯ್ತು.
ಈಗ ಅವಳು ತುಂಬು ಗರ್ಭಿಣಿ. ಸ್ವಲ್ಪದರಲ್ಲೇ ನೀನು ಅಜ್ಜಿಯಾಗಲಿದ್ದೀಯ.
ನಿನ್ನನ್ನು ನೋಡಬೇಕೆಂದು ಮನಸಿಗನ್ನಿಸುತ್ತಿದೆ.
ಸ್ವಲ್ಪ ದಿನಗಳು ಕಾಯಿ, ಒಂದು ತಿಂಗಳ ರಜೆ ಹಾಕಿ ನಿನ್ನ ಮಗ ನಿನ್ನನ್ನು ಕಾಣಲು ಬರುತ್ತಾನೆ.
 
ಇಂತಿ ನಿನ್ನ ಮಗ,..
 "
 ಅಮ್ಮನಿಗೆ ಹೋದ ಜೀವ ಮರಳಿ ಬಂದಂತಾಯ್ತು.
ಮರಳುಭೂಮಿಯಲ್ಲಿ ಬಾಯಾರಿ ಬಸವಳಿದು ನೀರ ಕಾಣದೆ ಗುಂಡಿ ತೋಡಿದಾಗ ಓಯಸಿಸ್ ಚಿಮ್ಮಿದರೆ ಸಿಗುತ್ತದಲ್ಲ ಅಂಥ ಅನುಭವ.
 
"ಅಯ್ಯೋ ಕಂದ,
ಎಲ್ಲಿದ್ದೆಯೋ ಇಷ್ಟು ದಿನ?
ಅಮ್ಮನಿಗೆ ಹೇಳದೆ ಮದುವೆಯಾಗೋ ಅವಸರ ಏನಿತ್ತೋ?
ಅದ್ಯಾವುದೋ ಕಾರಣ ನಿನ್ನನ್ನು ಮದುವೆಯಾಗಲಿಕ್ಕೆ ಪ್ರೇರೇಪಿಸಿದ್ದರೆ ನಾನೇನು ನಿನ್ನನ್ನು ಮದುವೆಯಾಗಬೇಡ  ಅಂತ ಹೇಳಿರುತ್ತಿದ್ದೆನೇನೋ ಹುಚ್ಚ.
ಒಂದೇ ಒಂದು ಮಾತು ಹೇಳಿದ್ದಿದ್ದರೆ ನಾನೇ ಓಡೋಡಿ ಬಂದು ನಿನ್ನ ಮದುವೆ ಮಾಡಿಸುತ್ತಿದ್ದೆನಲ್ಲೋ!!
ಹೋಗಲಿ ಬಿಡು. ನನ್ನ ಆಯ್ಕೆಯ ಬಗ್ಗೆ ನಿನಗೆ ಎಲ್ಲೋ ತಾತ್ಸಾರವಿರಬಹುದು.
ಅಷ್ಟು ಬೇಗ ಈ ಅಮ್ಮ ಹಳೆಯ ಮುದುಕಿಯಾಗಿ ಹೋದಳಾ?
ನೀ ಅತ್ತಾಗ ಹಾಲುಕೊಟ್ಟ,
ಎಡವಿದಾಗ ಎತ್ತಿ ನಿಲ್ಲಿಸಿದ,
ಬೇರೆಯವರು ಬೈದಾಗ ಅವರನ್ನೇ ಗದರಿಸಿದ,
ನಿನ್ನ ಕಣ್ಣಲ್ಲಿ ನೀರು ಬಂದಾಗ ನಿನ್ನನ್ನೆತ್ತಿ ಎದೆಗಾನಿಸಿದ,
ಹಸಿವೆಯೆಂದಾಗ ನನ್ನ ತಟ್ಟೆಯಲ್ಲಿದ್ದ ಗಂಜಿಯನ್ನೇ ಕುಡಿಸಿದ,
ಬಿದ್ದು ಗಾಯ ಮಾಡಿಕೊಂಡಾಗ ನಾನುಟ್ಟ ಸೀರೆಯನ್ನೇ ಹರಿದು ಕಟ್ಟಿದ,
ತುತ್ತು ತಿನ್ನದಿದ್ದಾಗ ಚಂದಮಾಮನ ತೋರಿಸಿ ತಿನ್ನಿಸಿದ,
ನೀನೋದಲು ಕುಳಿತಾಗ ಜೊತೆಗೇ ನಿದ್ರೆಗೆಟ್ಟ,  
ನೀ ಗೆದ್ದು ಬಹುಮಾನ ತಂದಾಗ ಆನಂದ ಭಾಷ್ಪ ಸುರಿಸಿದ,
ನೀ ಹುಷಾರಿಲ್ಲದೆ ಮಲಗಿದಾಗ ಊಟವೇ ಬೇಡವೆಂದು ಮಲಗಿದ ಈ ಅಮ್ಮ...
 ನೀ ಮದುವೆಯಾಗಬೇಕೆನಿಸಿದಾಗ ಮಾತ್ರ ನೆನಪಾಗಲಿಲ್ಲವೇನೋ?
 "
.....ಹಾಗೆಂದು ಹೇಳಬೇಕೆನಿಸಿತು, ಆದರೆ ಹೇಳಲಿಲ್ಲ.
ಅಮ್ಮನಿಗೆ ಎಂದೆಂದಿಗೂ ಮಗನ ಸಂತೋಷವೇ ಮುಖ್ಯ. 
 
"ಬಾ ಮಗನೇ, ನಿನಗಾಗಿಯೇ ಮತ್ತು ನಿನಗಾಗಿ ಮಾತ್ರ ಕಾದಿರುವ ಅಮ್ಮ" ಎಂದು ಮಾತ್ರ ಬರೆದಳು.
ಬಂದಿದ್ದ ವಿಳಾಸವನ್ನು ಹುಡುಕಿಕೊಂಡು ಹೋಗಬೇಕೆಂದುಕೊಂಡಳು. ಮನದ ಮೂಲೆಯಲ್ಲೊಂದು ಯೋಚನೆ ಬೇಡವೆಂದು ಹೇಳಿತು.
 
ಸ್ವಲ್ಪ ದಿನಗಳ ಬಳಿಕ ಮಗನಿಗೆ ಮುದ್ದಾದ ಮಗನೊಬ್ಬ ಜನಿಸಿದ.
 
ಅದೇಕೋ ಇದ್ದಕ್ಕಿದ್ದ ಹಾಗೆ ಅಮ್ಮನ ನೋಡಬೇಕೆನ್ನುವ ತವಕ ದಿನೇ ದಿನೇ ಜಾಸ್ತಿಯಾಗತೊಡಗಿತು.
 -------------------*-------------------*-------------------*-------------------*-------------------*-------------------*-------------------*
 
"ಹೇ ನೋಡಿಕೊಂಡು ಹೆಜ್ಜೆಹಾಕಮ್ಮ, ಕೈಯಲ್ಲಿ ಮಗು ಇದೆ"
ಪಕ್ಕದ ಮನೆಯ ಶಾಂತಕ್ಕ ಜೋರಾಗಿ ಕೂಗಿದಾಗಲೇ ಅಮ್ಮನಿಗೆ ಎಚ್ಚರವಾದದ್ದು.

ಓಡಿ ಹೋಗಿ ಮಗನನ್ನು ಆಲಂಗಿಸಿಕೊಂಡಳು ಅಮ್ಮ.
ಬೆಚ್ಚಗಿನ ಸ್ಪರ್ಶ.
ಮಗನ ಮನಸ್ಸಿನಲ್ಲಿ, ಹಿಂದೆ ತಾನು ಮಗುವಾಗಿದ್ದಾಗ ಏನಾದರೂ ಬಿದ್ದರೆ ಓಡಿಬಂದು ಎತ್ತಿ ಎದೆಗಾನಿಸಿಕೊಳ್ಳುತ್ತಿದ್ದ ಅದೇ ಅಮ್ಮನ ನೆನಪಾಯ್ತು.
ಅದೇ....ಸ್ಪರ್ಶ.

"ಛೇ ಅಮ್ಮ, ಇಷ್ಟು ದಿನ ನಿನ್ನಿಂದ ನಾನೇಕೆ ಇಷ್ಟು ದೂರ ಉಳಿದುಬಿಟ್ಟೆ. ಎಂತಹ ದೊಡ್ಡ ತಪ್ಪು ಮಾಡಿದೆ.
ನೀ ನನ್ನ ಜತೆಗಿದ್ದರೆ ಸಾಕು, ಅದೆಂತಹ ಹೇಳಲಾಗದ ಉತ್ಸಾಹ, ವಿಶ್ವಾಸ ಬಂದುಬಿಡುತ್ತದೆ ಈ ನನ್ನ ಮನಸ್ಸಿಗೆ.
ಈ ಸಲ ಅದೆಷ್ಟೇ ಕಷ್ಟವಾದರೂ ಸರಿ. ನೀ ನನ್ನ ಬಗ್ಗೆ ಬೇಸರಿಸಿಕೊಂಡರೂ ಸರಿ.
ನಿನ್ನನ್ನು ನಾನಿರುವ ಪಟ್ಟಣಕ್ಕೆ ಕರೆದುಕೊಂಡು ಹೋಗದೇ ಬಿಡುವುದಿಲ್ಲ.
ನನಗೆ ಗೊತ್ತು ನೀನು ಅಪ್ಪನಿದ್ದ ಈ ಮನೆಯನ್ನು ಬಿಟ್ಟು ಆ ದೂರದ ಪಟ್ಟಣಕ್ಕೆ ಬರಲಾರೆ ಎಂದು.
ಆದರೆ ನಾನು ನಿನ್ನನ್ನು ಬಿಟ್ಟಿರಲಾರೆ, ಇಲ್ಲಿರುವ ಒಂದು ತಿಂಗಳಲ್ಲಿ ನಿನ್ನ ಮನಸ್ಸು ಬದಲಾಯಿಸುವ ಪ್ರಯತ್ನ ಮಾಡುತ್ತೇನೆ!!"

ಮತ್ತೊಮ್ಮೆ ಪಕ್ಕದ ಮನೆಯ ಶಾಂತಕ್ಕನ ಧ್ವನಿ.
"ಮೊದಲನೇ ಸಲ ಗಂಡ-ಹೆಂಡತಿ-ಮಗು ಮನೆಗೆ ಬರ್ತಿದ್ದೀರ,
ಮುತ್ತೈದೇರು ಆರತಿ ಎತ್ತಿ ಮನೆ ತುಂಬಿಸ್ಕೋಬೇಕು.
ಒಂದ್ನಿಮಿಷ ಇರಿ,
 ನಾನು ಆರತಿ ತರ್ತೀನಿ"
ಶಾಂತಕ್ಕ ಓಡಿಹೋಗಿ ಮನೆಯೊಳಗಿಂದ ಆರತಿ ತಂದು ಬೆಳಗತೊಡಗಿದರು.

ಅಮ್ಮನ ನೋಟ ಇದೀಗ ಸೊಸೆಯ ಕಡೆಗೆ.
"ವಾವ್, ಎಂತಹ ಸುಂದರ ಲಕ್ಷಣ ಮುಖ.
ಮೊದಲ ಬಾರಿಗೆ ಲಕ್ಷ್ಮಿಯೇ ನಡೆದು ಈ ಮನೆಗೆ ಬಂದಿದ್ದಾಳೆ.
ಅಯ್ಯೋ ಮಗನೇ, ಈ ಮನೆಮಗಳನ್ನ ಮದುವೆಯಾಗೋದು ಹೇಳೋಕೆ ನನ್ನ ಹತ್ತಿರ ಸಂಕೋಚಪಟ್ಟೆಯ, ದಡ್ಡ!!"

ಬಲಗಾಲಿಟ್ಟು ಒಳಬಂದ ದಂಪತಿಗಳಿಗೆ  ಅಟ್ಟದ ಮೇಲಿದ್ದ ಚಾಪೆಯ ಹಾಸಿದಳು ಅಮ್ಮ.
ಅಡಿಗೆ ಮನೆಯ ಒಳಹೋಗಿ ಪಾನಕ ಮಾಡಿ ಮಗನಿಗೂ ಸೊಸೆಗೂ ಒಂದೊಂದು ಲೋಟ ಕೊಟ್ಟಳು.
ಒಂದೇ ಸಮನೆ ಗಟಗಟ ಕುಡಿದು ನಾಲಿಗೆಯ ಚಪ್ಪರಿಸಿ ಖಾಲಿ ಲೋಟವನ್ನು ಮಗ ಅಮ್ಮನ ಕೈಲಿತ್ತ.

ಊಟದ ಸಮಯವಾಗಿದೆಯೆಂದರಿತ ಅಮ್ಮ ಅಡಿಗೆಮನೆ ಕಡೆಗೆ ಹೆಜ್ಜೆಹಾಕಿದಳು.
ಒಂದೆರಡು ನಿಮಿಷವಾಗಿಲ್ಲ. ಪಿಸಪಿಸ ಮಾತು ಕಿವಿಗೆ ಬಿದ್ದು ಒಳಗಿಂದಲೇ ಕೊಂಚ ಇಣುಕಿ ನೋಡಿದಳು.
ಮಗ ಏನೋ ಒತ್ತಾಯ ಮಾಡುತ್ತಿದ್ದಾನೆ. ಸೊಸೆ ಮುಖ ಹಿಂಡುತ್ತಿದ್ದಳು. ಪಾನಕ ಮಾತ್ರ ಲೋಟದಲ್ಲಿ ಹಾಗೆಯೇ ಇದೆ....

 -------------------*-------------------*-------------------*-------------------*-------------------*-------------------*-------------------*

ಮಗು ಅತ್ತ ಸದ್ದಾಯ್ತು.
ಓಡಿಬಂದು ಅಮ್ಮ ಮೊಮ್ಮಗನನೆತ್ತಿ ಎದೆಗಾನಿಸಿಕೊಂಡು ಸಮಾಧಾನಪಡಿಸತೊಡಗಿದಳು.
ಎಂತಹ ಮುದ್ದುಮುಖ.. ಥೇಟ್ ಅವರ ತಾತನಂತೆಯೇ.
ಅವರಿದ್ದಿದ್ದರೆ ಈ ಕಂದನನ್ನು ನೋಡಿ ಎಷ್ಟೊಂದು ಖುಷಿಪಡುತ್ತಿದ್ದಾರೋ..
ಲಗುಬಗೆಯಿಂದ ನಡೆದು ಬಂದ ಸೊಸೆ ಪಟಕ್ಕನೆ ಮಗುವನ್ನು ಕಸಿದು ಪಕ್ಕ ಮಲಗಿಸಿಕೊಂಡು ಸಮಾಧಾನ ಮಾಡತೊಡಗಿದಳು.
 -------------------*-------------------*-------------------*-------------------*-------------------*-------------------*-------------------*
ಎರಡು ದಿನ ಕಳೆದಿವೆ ರಾತ್ರಿಯಾಗಿದೆ.
ಹಜಾರದಲ್ಲಿ ಮಲಗಿದ್ದಾಳೆ ಅಮ್ಮ.
ಪಕ್ಕದ ಚಿಕ್ಕ ರೂಮಿನಲ್ಲಿ ಸಂಭಾಷಣೆ ನಡೆಯುತ್ತಿದೆ.

"ಥೂ.. ಈ ದರಿದ್ರ ಊರಿನಲ್ಲಿ ಬೇಕಾದರೆ ನೀವಿರಿ.
ನಾನು ನನ್ನ ಮಗೂನ ಕರ್ಕೊಂಡು ನಾಳೆನೇ ಹೊರಡುತ್ತೇನೆ.
ಏನೀ ಊರು,ಒಬ್ಬರಾದರೂ ಕ್ಲೀನ್ ಇಲ್ಲ.
ಮನೆ ಅಂತೂ ಪೂರ್ತಿ ಗಲೀಜಾಗಿದೆ. ಬಚ್ಚಲ ಮನೇನೂ ಸರಿಯಿಲ್ಲ.
ಎಲ್ಲಿ ನೋಡಿದ್ರೂ ಧೂಳು ಧೂಳು.
ಚಳೀಗೆ ಒಂದು ಒಳ್ಳೇ ಹೊದಿಕೆ ಇಲ್ಲ.
ಬೇಜಾರಿಗೆ ಒಂದು ಟಿವಿ,ರೇಡಿಯೋ ಇಲ್ಲ. ಆಮೇಲೆ ಒಂದು ಫ್ರಿಡ್ಜ್, ಫ್ಯಾನ್ ಏನೇನೂ ಇಲ್ಲ.
ಮಗು ಅಂತೂ ರಾತ್ರಿ ಪೂರ ನಿದ್ರೆ ಮಾಡಿಲ್ಲ. ಸೊಳ್ಳೆ ಜಾಸ್ತಿ ಬೇರೆ.
ಅದ್ಯಾವುದೋ ಲೋಕಲ್ ಸೊಳ್ಳೆ ಬತ್ತಿ ಹಚ್ಚಿದಾರೆ.
ನನಗೆ ಅದರ ವಾಸನೇನೆ ತಡಕೊಳ್ಳೋಕೆ ಆಗ್ತಾ ಇಲ್ಲ.
ಮಗೂಗೆ ಇನ್ಫೆಕ್ಷನ್ ಆಗೋಲ್ವೇ ಈ ತರ ಮನೆ ಇಟ್ಕೊಂಡ್ರೆ.

ಮೊನ್ನೆ ನಾವು ಬಂದಾಗ ನಿಮ್ಮಮ್ಮನ ಕೈಲಿ ಕಡೇಪಕ್ಷ ಒಳ್ಳೇ ಅಡಿಗೆನಾದ್ರೂ ಮಾಡಿಟ್ಟಿರೋಕೆ ಆಗ್ತಿರ್ಲಿಲ್ವಾ?
ಅದೇನೋ ಪಾನಕ ಕೊಟ್ಟಿದ್ದಾರೆ. ಅದಂತೂ ಸಕ್ಕರೆ ಮಯ.
ನಿಮ್ಮಮ್ಮಂಗೆ ಮಗೂನಾ ಸರಿಯಾಗಿ ಎತ್ತಿಕೊಳ್ಳೋಕೂ ಬರಲ್ಲ.
ಮಗು ಬೇರೆ ಎಷ್ಟು ಅಳುತ್ತಾ ಇತ್ತು ಗೊತ್ತಾ, ನಿಮ್ಮಮ್ಮ ಅದಕ್ಕೆ ಸ್ನಾನ ಮಾಡಿಸ್‌ಬೇಕಾದ್ರೆ.
ನಂಗಂತೂ ಅಯ್ಯೋ ಅನ್ನಿಸಿಬಿಟ್ಟಿತಪ್ಪ.
ಮಗೂಗೆ ನೆಗಡಿ ಆಗಿದೆ, ಹಾಸ್ಪಿಟಲ್ ಗೆ ಕರ್ಕೊಂಡು ಹೋಗೋಣ ಅಂದ್ರೆ  ನಿಮ್ಮಮ್ಮ ಅದಕ್ಕೂ ಬಿಡಲಿಲ್ಲ.
ಅದ್ಯಾವುದೋ ಕೆಲಸಕ್ಕೆ ಬಾರದ ಕಷಾಯ ಕೊಟ್ಟಿದ್ದಾರೆ. ಏನು ಡಾಕ್ಟರ್ ಓದಿದಾರೆ ನಿಮ್ಮಮ್ಮ ಮನೇಲೆ ಔಷದಿ ಕೊಟ್ಟುಬಿಡೋಕೆ?

ಈ ಮನೇಲಿ ಚಪ್ಪಲಿನೂ ಹಾಕಿಕೊಂಡು ಓಡಾಡೋ ಹಾಗಿಲ್ಲ.
ಪೆಡೀಕ್ಯೂರ್ ಮಾಡಿಸಿದ ಪಾದಗಳೆಲ್ಲ ಹಾಳಾಗಿ ಹೋಗಿವೆ.
ಬೆಡ್ ಕಾಫಿನೂ ಇಲ್ಲ. ಪೂಜೆ ಮಾಡ್ಬಿಟ್ಟೆ ಅಂತೆ ಬಾಕಿ ಎಲ್ಲ ಶುರುವಾಗೋದು, ಏನು  ಮಡಿವಂತರೋ?

ನನಗಂತೂ ಯಾವುದೋ ಕೊಂಪೆಗೆ ಬಂದುಬಿಟ್ಟಿದ್ದೀನೇನೋ ಅನ್ನಿಸ್ತಿದೆ... ಸಾಕಪ್ಪ ಸಾಕು"
 -------------------*-------------------*-------------------*-------------------*-------------------*-------------------*-------------------*

ಬೆಳಗಾಯಿತು.

"ಅಮ್ಮ ನಮ್ಮ ಆಫೀಸಿನಿಂದ ನನಗೆ ಫೋನ್ ಕಾಲ್ ಬಂದಿದೆ.
ಯಾವುದೋ ಬಹಳ ಇಂಪಾರ್ಟೆಂಟ್ ಕೆಲಸ.
ನಾವು ಇವತ್ತೇ ಹೊರಡುತ್ತೇವೆ.
ನಮ್ಮ ಲೀವ್ ಗಳನ್ನೆಲ್ಲ ಕ್ಯಾನ್ಸಲ್ ಮಾಡಿದ್ದಾರಂತೆ. ಅರ್ಜೆಂಟ್ ಹೋಗ್‌ಬೇಕು.
ಮತ್ತೆ ಸಮಯ ಮಾಡ್ಕೊಂಡು ಬರ್ತೀವಿ"

ಒಲ್ಲದ ಮನಸ್ಸಿನಿಂದ ಮಗ ಹೇಳಿದ.
ಕಾರು ಭರ್ರನೆ ಧೂಳೆಬ್ಬಿಸಿಕೊಂಡು ಹೊರಟುಹೋಯಿತು.
ಅಮ್ಮನ ಕಣ್ಣಿನಿಂದ ಜಿನುಗಿದ ನೀರು ನೆಲದಲ್ಲಿ ಇಂಗಿ ಮಾಯವಾಯಿತು.

ಅಮ್ಮನಿಗೆ ಗೊತ್ತು... ಎಲ್ಲವೂ ಸರಿಯಾಗಿಲ್ಲವೆಂದು.
ಜತೆಜತೆಗೆ ಮಗನಿಗೆ ನಟನೆಯೂ ಸರಿಯಾಗಿ ಬರುವುದಿಲ್ಲವೆಂದು.....
 -------------------*-------------------*-------------------*-------------------*-------------------*-------------------*-------------------*