Thursday, February 24, 2011

ನೆನಪುಗಳ ಮೆಲುಕು

ಸುಮಾರು ವರ್ಷಗಳ ಹಿಂದಿನ ಮಾತು. ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮದೊಂದು ಸರ್ಕಾರಿ ಶಾಲೆ. ಇಡೀ ನನ್ನಶಾಲಾ ಜೀವನದಲ್ಲಿ ನಾನು ಪಠ್ಯಪುಸ್ತಕಗಳನ್ನು ಹೊಸದಾಗಿ ಕೊಂಡು ಓದಲೇ ಇಲ್ಲ. ನನ್ನ ಹಿರಿಯ ಮಿತ್ರರೆಲ್ಲ ತಮ್ಮ ಪುಸ್ತಕಗಳನ್ನೆಲ್ಲನನಗೆ ಕೊಟ್ಟುಬಿಡುತ್ತಿದ್ದರು.
ಹಳೆಯ ಪುಸ್ತಕ, ಹೊಸ ವಿದ್ಯಾರ್ಥಿ!!!
ಊಟಕ್ಕೆ ತೊಂದರೆಯಿಲ್ಲದಿದ್ದರೂ ಮನೆಯಲ್ಲಿ ಹಣಕಾಸಿನ ವ್ಯವಹಾರ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದಾಯವೇನಿದ್ದರೂ ವ್ಯವಸಾಯದಲ್ಲಿ. ಅದೂ ವರ್ಷಕೊಮ್ಮೆ. ವ್ಯವಸಾಯವೆಂಬುದಂತೂ ಹಳ್ಳಿಗರಿಗೆ ಲಾಟರಿಯಿದ್ದ ಹಾಗೆ. ಮಳೆ ಚೆನ್ನಾಗಿ ಕಾಲಕಾಲಕ್ಕೆ ಬಂದರೆ ಆ ವರ್ಷ ಬಂಪರ್. ಇಲ್ಲದಿದ್ದರೆ ಭಾರಿ ನಷ್ಟ. ಜತೆಗೆ ತಲೆ ಮೇಲೆ ಮತ್ತಷ್ಟು ಸಾಲ. ಮನೆಯಲ್ಲಿ ಸಂಪಾದನೆ ಮಾಡುವ ಬೇರೆ ಯಾವುದೇ ದಾರಿಯಿರಲಿಲ್ಲ. ಕಡೇಪಕ್ಷ ತರಕಾರಿ ತರಲೂ ಕೈಯಲ್ಲಿ ಕಾಸಿಲ್ಲದಂತಾಗಿ ಹೋಯಿತು. ಕಷ್ಟ ನುಂಗದೆ ಬೇರೆ ವಿಧಿಯಿರಲಿಲ್ಲ.

ನಮ್ಮ ಮನೆಯ ಹಿತ್ತಿಲಿನಲ್ಲಿ ಒಂದು ಸೀಬೇಕಾಯಿ ಮರವಿತ್ತು. ನೋಡಲು ಬಹಳ ಪುಟ್ಟದಾಗಿದ್ದರೂ ಸಮಯ ಬಂದಾಗ ಭಾರವಾಗುವಷ್ಟು ಸೀಬೆಹಣ್ಣು ಬಿಡುತ್ತಿತ್ತು. ಹಿತ್ತಿಲಿಗೆ ಯಾವಾಗಲೊಮ್ಮೆ ಹೋದರಂತೂ ಸೀಬೆಹಣ್ಣಿನ ಘಮ ತಲೆಗೆ ಹತ್ತುವಷ್ಟು ಬರುತ್ತಿತ್ತು. ಹಣ್ಣಿನ ಗೊಂಚಲುಗಳನ್ನು ನೋಡಿದರೇ ಸಾಕು, ಬಾಯಿ ತುಂಬ ನೀರು...

ಒಂದು ದಿನ ಹೀಗೆ.. ಏನೋ ಆಲೋಚನೆ ಬಂದಿದ್ದೇ ತಡ ಬೆಳಿಗ್ಗೆ ಬೇಗನೆ 6 ಗಂಟೆಗೆ ಎದ್ದು ಹಿತ್ತಲಿಗೆ ಹೋಗಿ ಮರಹತ್ತಿದೆ. ಹಣ್ಣಾಗಿ ಇನ್ನೇನು ಬೀಳುತ್ತವೇನೂ ಅನ್ನುವಂತಿದ್ದ ಹಣ್ಣುಗಳನ್ನೆಲ್ಲ ಕೊಯ್ದು ಪ್ಲಾಸ್ಟಿಕ್ ಕವರ್ ಗೆ ಹಾಕಿಕೊಂಡೆ. ಕವರ್ ಪೂರ ಭರ್ತಿ.
ಶಾಲೆ ಆರಂಭವಾಗೋದು 10 ಗಂಟೆಗೆ. 8 ಗಂಟೆಗೆಲ್ಲ ಶಾಲೆಯ ಆಟದ ಮೈದಾನದಲ್ಲಿ ಹಾಜರು. ಆಗಾಗಲೇ ಬಹಳಷ್ಟು ಶಾಲೆಯ ಹುಡುಗರು ಬಂದಿರುತ್ತಿದ್ದರು. ಅವರೆಲ್ಲರಿಗೂ ಸೀಬೆಹಣ್ಣುಗಳನ್ನು ಮಾರಲು ಶುರು ಮಾಡಿದೆ. ಬರೀ ಐವತ್ತು ಪೈಸೆ, 1 ರುಪಾಯಿಗೆಲ್ಲ. ಶಾಲೆ ಶುರುವಾಗುವುದರೊಳಗೆ ಕೊಯ್ದು ತಂದಿದ್ದ ಸೀಬೆಹಣ್ಣುಗಳೆಲ್ಲ ಖಾಲಿ. ನನ್ನ ಜೇಬು ಭರ್ತಿ. ಮನಸು ಬಹಳ ಹಗುರ.

ಶಾಲೆ ಮುಗಿಸಿ ಮನೆ ತಲುಪಿ ಅಮ್ಮನ ಕೈಗೆ ಸಂಪಾದಿಸಿದ ಚಿಲ್ಲರೆ ಹಣವನ್ನೆಲ್ಲ ಕೊಟ್ಟಾಗ ಏನೋ ಪ್ರಪಂಚವನ್ನೇ ಗೆದ್ದಷ್ಟೇ ಸಂಭ್ರಮ.... ಅಮ್ಮನ ಕಣ್ಣಲ್ಲಿ ನೀರು.
ಆ ಸಮಯದಲ್ಲಿ ಹಣಕ್ಕೆ ಬಹಳ ಬೆಲೆಯಿತ್ತು ಕೂಡ. ನನ್ನ ಅಲ್ಪ ಸಂಪಾದನೆಯೇ ಮನೆಯ ದಿನನಿತ್ಯದ ಖರ್ಚಿಗೆ ಬಳಕೆಯಾಗತೊಡಗಿತು. ಆವತ್ತೇ ನಾನು ಹಣದ ಬೆಲೆಯನ್ನು ಅರಿತಿದ್ದೂ ಕೂಡಾ..

ದಿನಗಳು, ತಿಂಗಳುಗಳು, ವರ್ಷಗಳು ಕಳೆದವು.

ಜೀವನ ಸೀಬೇಕಾಯಿ ಮಾರುತ್ತಿದ್ದ ಸರಕಾರೀ ಶಾಲೆಯ ಹುಡುಗನೊಬ್ಬನನ್ನು ಹಳ್ಳಿಯಿಂದ ಮೈಸೂರೆಂಬ ಪಟ್ಟಣಕ್ಕೆ,
ನಂತರ ಬೆಂಗಳೂರೆಂಬ ಮಹಾನಗರಿಯ ಇಂಜಿನಿಯರಿಂಗ್ ಕಾಲೇಜಿಗೆ ತಂದುಬಿಟ್ಟಿತು.

ಕೊನೆಗೆ ಸತತ ಪ್ರಯತ್ನದ ಸಲುವಾಗಿ ಇಂಜಿನಿಯರ್ ಆದೆ ಕೂಡಾ...
ಜೀವನ ಬಹಳ ಬದಲಾಯಿತು. ದೇವರು ನನ್ನನ್ನು, ನಮ್ಮ ಮನೆಯವರೆಲ್ಲರನ್ನು ಉತ್ತಮ ಸ್ಥಿತಿಗೆ ತಂದಿಟ್ಟ.

ಮೊನ್ನೆ ಮೊನ್ನೆ ಊರಿಗೆ ಹೋಗಿದ್ದೆ.
ಒಂದು ಕಾಲದಲ್ಲಿ ನಮ್ಮೆಲ್ಲರನ್ನೂ ಸಾಕಿದ್ದ ಅದೇ ಸೀಬೆಮರ ಇಂದು ಬಡಕಲಾಗಿ ಹೋಗಿತ್ತು.
ಎಲೆಗಳೆಲ್ಲ ಒಣಗಿದ್ದವು. ರೆಂಬೆಕೊಂಬೆಗಳಂತೂ ಕಳೆಗುಂದಿ ಕಡೆಗಾಲ ಸಮೀಪಿಸಿದ ವೃದ್ಧರಂತಾಗಿ ಹೋಗಿದ್ದವು.
ಎಲ್ಲ ಬರೀ ಖಾಲಿ ಖಾಲಿ..

ಹಿತ್ತಲಿನ ಮುಳ್ಳುಗಳನ್ನು ಸ್ವಚ್ಛ ಮಾಡಲು ಬಂದಿದ್ದ ನಮ್ಮ ಮನೆಯ ಕೆಲಸಗಾರನೊಬ್ಬ ನಮ್ಮನ್ನು ಕೇಳಿದ.

"ಸರ್, ಈ ಬಡಕಲು ಮರವನ್ನು ಯಾಕೆ ಇಟ್ಟುಕೊಂಡಿದ್ದಿರಾ,
ಹೇಳಿ, ಕಡಿದು ಹಾಕಿಬಿಡುತ್ತೀನಿ" ಅಂತ.

ಎಲ್ಲರೂ ಒಂದೇ ಉಸಿರಲ್ಲಿ "ಬೇಡ, ಬೇಡ " ಎಂದಷ್ಟೇ ಹೇಳಿದರು.
ಆತನಿಗೆ ತಲೆಬುಡ ಅರ್ಥವಾಗಲಿಲ್ಲ.

ಪಾಪ, ಅವನಿಗೇನು ಗೊತ್ತು,
"ಸಲಹಿದವರನ್ನು ಕಡಿಯುವುದು ಎಷ್ಟೊಂದು ಕ್ರೌರ್ಯದ ಕೆಲಸ" ಅಂತ........

ನಿಮ್ಮವನು,
ಸಂತು